91089 55566       info@sarvajnaschool.edu.in

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮೌಲ್ಯಾಧಾರಿತ ಆನ್ಲೈನ್ ಶಿಕ್ಷಣ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮೌಲ್ಯಾಧಾರಿತ ಆನ್ಲೈನ್ ಶಿಕ್ಷಣ

 

“ನಹಿ ಜ್ಞಾನೇನ ಸದೃಶಂ”. ಜ್ಞಾನಕ್ಕೆ ಸರಿ ಸಮಾನವಾದುದು ಯಾವುದು ಇಲ್ಲ. “ವಿದ್ಯಾದದಾತಿ

 ವಿನಯಂ” ವಿದ್ಯೆಗೆ ವಿನಯವೇ ಭೂಷಣ. ಈ ವಾಕ್ಯಗಳು ವಿದ್ಯೆ ಅಥವಾ ಜ್ಞಾನದ ಮಹತ್ವದ ಬಗ್ಗೆ ಬೆಳಕು ಚೆಲ್ಲುತ್ತದೆ.

 

ಕೋವಿಡ್-೧೯ ಅಥವಾ ಕೊರೋನಾ ವೈರಸ್ ಮಹಾಮಾರಿಯ ಆಕ್ಟೋಪಸ್ ಹಿಡಿತಕ್ಕೆ ಇಡಿ ವಿಶ್ವವೇ ಬಲಿಯಾಗಿ ನರಳುತ್ತಿದೆ. ಕಣ್ಣಿಗೆ ಕಾಣದ ಈ ವೈರಸ್ ಜನರ ಜೀವನಶೈಲಿಯನ್ನು ಬದಲಿಸಿದೆ. ದೇಶದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯವಾದ ಪ್ರಭಾವವನ್ನು ಬೀರಿವೆ.

 

ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಷ್ಟರಮಟ್ಟಿಗೆ ಸುರಕ್ಷಿತವಾಗಿರುತ್ತದೆ? ಶಾಲೆಯಲ್ಲಿ ಆರೋಗ್ಯಕರ ವಾತಾವರಣವಿರುವುದೇ? ಮಕ್ಕಳು ತಮ್ಮ ಜವಾಬ್ದಾರಿಯ ಹೊಣೆಯನ್ನು ನಿರ್ವಹಿಸಲು ಸಮರ್ಥರೇ? ಹೀಗೆ ಹತ್ತು  ಹಲವಾರು ಪ್ರಶ್ನೆಗಳು, ಗೊಂದಲಗಳು ಇರುವ ಈ ಪ್ರಸ್ತುತ ಪರಿಸ್ಥಿತಿಯಲ್ಲಿ ಆಧುನಿಕ ವಿಜ್ಞಾನದ ವರವಾಗಿರುವ ತಂತ್ರಜ್ಞಾನದ ಅರಿವು ಪ್ರತಿಯೊಬ್ಬ ನಾಗರೀಕನಿಗೂ ಅತಿ ಅವಶ್ಯಕ. ಮಾಹಿತಿ ತಂತ್ರಜ್ಞಾನದ ವಿಪುಲ ಅವಕಾಶಗಳನ್ನು, ವಿಜ್ಞಾನ ಲೋಕದ ಕಾಣಿಕೆಗಳನ್ನು ಕಲಿತು, ಅರಿತು, ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವ ಅವಶ್ಯಕತೆ ಮತ್ತು ಸವಾಲು ನಮ್ಮೆದುರಿಗಿದೆ. ಮಕ್ಕಳ ಹಿತ ದೃಷ್ಟಿಯಿಂದ ಇಂದು ಆನ್ಲೈನ್ ಶಿಕ್ಷಣವು ಅನಿವಾರ್ಯವಾಗಿದೆ.

 

ಇತ್ತೀಚಿನ ಕೆಲ ಮಹಾ ಬುದ್ಧಿವಂತ ಮಾಧ್ಯಮಗಳ ಸಮೀಕ್ಷೆಯು “ಆನ್ಲೈನ್ ಶಿಕ್ಷಣದ” ಸಮಸ್ಯೆಗಳನ್ನು ಪಟ್ಟಿ ಮಾಡಿ ಅದನ್ನು ವಿರೋಧಿಸುತ್ತಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸಮೀಕ್ಷೆಯ ಪ್ರಕಾರ ಆನ್ಲೈನ್ ಶಿಕ್ಷಣದಿಂದ ತಲೆನೋವು, ಏಕಾಗ್ರತೆ ಇಲ್ಲದೆ ಇರುವುದು, ಆತ್ಮ ವಿಶ್ವಾಸದ ಕುಗ್ಗುವಿಕೆ, ಒಂಟಿತನ, ಕಣ್ಣಿನ ನೋವು, ತಾಂತ್ರಿಕ ಜ್ಞಾನದ ಕೊರತೆ, ಚರ್ಚೆಗೆ ಮುಕ್ತ ಅವಕಾಶ ಇಲ್ಲದೆ ಇರುವುದು, ಇತ್ಯಾದಿ ಹಲವಾರು ಸಮಸ್ಯೆಗಳು ಎದುರಾಗಬಹುದು. ಈ ಪಟ್ಟಿಯಿಂದ ಚಿಂತಿತರಾದ ಪೋಷಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗು ಶಿಕ್ಷಕರು ಚರ್ಚೆಗೆ ವೇದಿಕೆ ಸಿದ್ಧ ಪಡಿಸಿಕೊಂಡಿದ್ದಾರೆ.

 

ಆದರೆ …ನಿಂತ ನೀರು ಕೊಳೆಯುತ್ತದೆ, ಹರಿಯುವ ನೀರು ಶುದ್ಧವಾಗಿರುತ್ತದೆ ಎನ್ನುವ ಹಾಗೆ ಪರಿಸ್ಥಿತಿಗೆ, ಸಂದರ್ಭಕ್ಕೆ ಹೊಂದಿಕೊಳ್ಳುವ ಬುದ್ಧಿವಂತಿಕೆ ಎಲ್ಲರಿಗೂ ಈಗ ಬೇಕಾಗಿದೆ.

 

“ವರ್ತನೆಯ ನರ್ತನಕೆ ಪರಿವರ್ತನೆಯೇ ಸೊಗಸು” ಎನ್ನುವ ಹಾಗೆ ಪರಿವರ್ತನೆಯ ತೀವ್ರತೆಯನ್ನು ಅರಿತು ಮುಂದೆ ಸಾಗಲು ಆನ್ಲೈನ್ ಶಿಕ್ಷಣ ಸರ್ವರಿಗೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಶಾಲೆಗಳು ಅತ್ಯಾಧುನಿಕ ಹಾಗು ಸುಸಜ್ಜಿತ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸುತ್ತಿದ್ದರೆ, ಕೆಲವು ಶಾಲೆಗಳು ಯಾವ ರೀತಿ ಆನ್ಲೈನ್ ತರಗತಿಗಳನ್ನು ನಡೆಸಬೇಕು? ಹೇಗೆ ಮಾಡಿದರೆ ಉತ್ತಮ? ಯಾವ ಪದ್ಧತಿಯನ್ನು ಅನುಸರಿಸಬೇಕು? ಎನ್ನುವುದರ ಬಗ್ಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

 

ಈ ಎರಡರ ಮಧ್ಯೆ ಶ್ರೀ ಸರ್ವಜ್ಞ ಪಬ್ಲಿಕ್ ಶಾಲೆ ಪೋಷಕರಿಗೆ ಹೆಚ್ಚು ಹೊರೆಯಾಗದ ಹಾಗೆ, ಕನಿಷ್ಠ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ. ಶಾಲೆಯು ತನ್ನದೇ ಆದ ಯು ಟ್ಯೂಬ್ ಚಾನೆಲನ್ನು ಹೊಂದಿದ್ದು, ಶಿಕ್ಷಕರು ತಮ್ಮ ಪಾಠ, ಪ್ರವಚನದ ವಿಡಿಯೋಗಳನ್ನು ಇದರಲ್ಲಿ ಹಾಕುತ್ತಾರೆ. ನಂತರ ಶಿಕ್ಷಕರು ತಾವು ನಿರ್ಮಿಸಿರುವ ವಾಟ್ಸಅಪ್ ಗ್ರೂಪ್ ಗಳಲ್ಲಿ ಜ್ಞಾನವನ್ನು ಹಂಚಿ ಮಕ್ಕಳಿಗೆ ಮಾರ್ಗ ದರ್ಶನ ನೀಡುತ್ತಾರೆ.

 

ನಮ್ಮ ಶಿಕ್ಷಣ ಪದ್ದತಿಯು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುವುದರ ಜೊತೆಗೆ ಏಕಾಗ್ರತೆಗೆ ಧಕ್ಕೆಯಾಗದಂತೆ ಸಮಯ ಪಾಲನೆಯ ಬಗ್ಗೆ ಗಮನ ಹರಿಸಿದೆ.

 

ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ.ಪಿ. ಮಹದೇವ ಪ್ರಸಾದ್ ರವರು ಎಲ್ಲ ಮಕ್ಕಳಿಗೂ ಗುಣ ಮಟ್ಟದ, ಸಮಾನ ಶಿಕ್ಷಣವನ್ನು ನೀಡಬೇಕೆಂದು ನುರಿತ, ತಜ್ಞ ಅಧ್ಯಾಪಕವೃಂದದವರೊಂದಿಗೆ ಕ್ರಿಯಾಶೀಲರಾಗಿದ್ದಾರೆ. ಮಕ್ಕಳು ಸಂತೋಷದಿಂದ ಕಲಿತು ಪರಿಪೂರ್ಣ ವ್ಯಕ್ತಿಯಾಗಿ ಬೆಳೆದು ಸಮಾಜದ ಆಸ್ತಿಯಾಗಬೇಕೆಂಬ ಹೆಬ್ಬಯಕೆ ನಮ್ಮ ಶಾಲೆಯದಾಗಿದೆ.